ಶಾಂತಿನಾಥ ದೇಸಾಯಿ  	1929-98. ನವ್ಯಕಾದಂಬರಿಕಾರರು, ಕಥೆಗಾರರು ಹಾಗೂ ವಿಮರ್ಶಕರು. ಕನ್ನಡ ಕಾದಂಬರಿ ಕ್ಷೇತ್ರದಲ್ಲಿ ಹೊಸದಿಗಂತವನ್ನು ತೋರಿದವರು. ಶಾಂತಿನಾಥ ಕುಬೇರಪ್ಪ ದೇಸಾಯಿ ಎಂಬುದು ಇವರ ಪೂರ್ಣಹೆಸರು. 1929 ಜುಲೈ 22ರಂದು ಉತ್ತರ ಕನ್ನೆ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ಹಳಿಯಾಳ, ಧಾರವಾಡಗ ಳಲ್ಲಿ ಪ್ರಾಥಮಿಕ ಹಾಗೂ ಮೆಟ್ರಿಕ್ ವಿದ್ಯಾಭ್ಯಾಸ ಮುಗಿಸಿ ಮುಂಬಯಿಯ ಪ್ರತಿಷ್ಠಿತ ವಿಲ್ಸನ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದರು. ಇಂಗ್ಲಿಷ್ ಇವರ ವಿಶೇಷ ಅಧ್ಯಯನ ವಿಷಯ. ಶಾಲೆಯ ದಿನಗಳಿಂದಲೇ ಇವರ ಪ್ರತಿಭೆಯನ್ನು ಪತ್ತೆಹಚ್ಚಿ ತಮ್ಮ ಚಿಂತನಶೀಲತೆಯ ಪ್ರಭಾವ ಬೀರಿದವರು ಗಂಗಾಧರ ಚಿತ್ತಾಲ. ಕಾಲೇಜು ವ್ಯಾಸಂಗ ಮುಗಿಸಿದಾಗ ಇವರ ವಿಶೇಷ ಪ್ರತಿಭೆ, ಪ್ರೌಢಿಮೆಗಳನ್ನು ಗುರುತಿಸಿ ಬ್ರಿಟಿಷ್ ಕೌನ್ಸಿಲ್ 1958-59ರಲ್ಲಿ ಶಿಷ್ಯವೃತ್ತಿ ನೀಡಿತು. ಇದರ ಮೇರೆಗೆ ಎರಡು ವರ್ಷಗಳು ಇಂಗ್ಲೆಂಡಿಗೆ ತೆರಳಿ ಸಂಶೋ ಧನೆಯ ಕೆಲಸದಲ್ಲಿ ತೊಡಗಿ ಕೊಂಡರು. ಹೀಗೆ ಹಡಗಿನಲ್ಲಿ ವಿದೇಶಕ್ಕೆ ತೆರಳಿದಾಗ ಆದ ಪ್ರಯಾಣದ ಅನುಭವದ ವಿಶೇಷ ಸ್ಫೂರ್ತಿಯಿಂದ ಕ್ಷಿತಿಜ (1966) ಎಂಬ ಸಣ್ಣಕಥೆಯನ್ನ ಬರೆದರು. ಈ ಸಣ್ಣಕಥೆ ಇವರನ್ನು ಜನ ಪ್ರಿಯಗೊಳಿಸಿತು. ಹಡಗಿನಲ್ಲಿ ಇಂಗ್ಲೆಂಡಿಗೆ ಹೋಗುವ ಒಬ್ಬ ಮಹಿಳೆಯೇ ಈ ಕಥೆಯ ಕೇಂದ್ರ. ಸಂಶೋಧನೆ ಮುಗಿಸಿ ಸ್ವದೇಶಕ್ಕೆ ಮರಳಿ ಬಂದ ಇವರು ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲಿಷ್ ಉಪಪ್ರಾಧ್ಯಾಪಕರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1988ರಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದರು. ಕರ್ನಾಟಕ ಹಾಗೂ ಕೇಂದ್ರಸಾಹಿತ್ಯ ಅಕಾಡಮಿ ಹಾಗೂ ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಗಳಲ್ಲಿ ಸಲಹೆಗಾರರಾಗಿಯೂ ಹಲವು ವರ್ಷಗಳು ಕಾರ್ಯನಿರ್ವಹಿಸಿದರು.

	ಇವರು ಸುಮಾರು ಐವತ್ತಕ್ಕೂ ಹೆಚ್ಚು ಕಥೆಗಳನ್ನು ಬರೆದಿದ್ದಾರೆ. ಮಂಜುಗಡ್ಡೆ (1959), ಕ್ಷಿತಿಜ (1966), ದಂಡೆ (1971), ರಾಕ್ಷಸ (1977), ಪರಿವರ್ತನೆ (1984), ಕೂರ್ಮಾವತಾರ (1988), ಕೆಲವು ಆಯ್ದ ಕತೆಗಳು (1977)-ಇವು ಇವರ ಹಲವು ಪ್ರಸಿದ್ಧ ಕಥಾ ಸಂಕಲನಗಳು,  ಇವರ ಮಂಜುಗಡ್ಡೆ ಹಾಗೂ ಕ್ಷಿತಿಜಗಳು ಬಹಳ ಚರ್ಚೆಗೊಳಗಾದ ಕಥೆಗಳಾಗಿವೆ. ಸಾಮಾನ್ಯವಾಗಿ ಲಘುವಾದದ್ದು ಎಂದು ಎಲ್ಲರೂ ತಿಳಿಯುವ ವಿಷಯಗಳು, ವ್ಯಕ್ತಿಯ ಮನಸ್ಸಿನ ಅಂತರಾಳದ ಹಲವು ಪ್ರಕ್ರಿಯೆಗಳು, ಸಮಾಜದಲ್ಲಿ ಬದಿಗೊತ್ತಿದ ಹಲವು ವಿಷಯಗಳು ಇಂತಹವುಗಳಿಗೆ ತಮ್ಮ ಕಥಾಪ್ರಪಂಚದಲ್ಲಿ ವಸ್ತುವಾಗುವ ಯೋಗ್ಯತೆಯನ್ನು ಇವರು ಕಲ್ಪಿಸುತ್ತಾರೆ, ಅದರಲ್ಲೂ ವಿಮರ್ಶಿಸಬೇಕಾದ ವಿಚಾರಗಳತ್ತ ಓದುಗರನ್ನು ಸೆಳೆಯುತ್ತಾರೆ.

	ಮುಕ್ತಿ (1961), ವಿಕ್ಷೇಪ (1971), ಸೃಷ್ಟಿ (1979), ಬೀಜ (1981), ಸಂಬಂಧ (1981), ಅಂತರಾಳ (1993), ಓಂಣಮೋ (1998)-ಇವು ಇವರ ಪ್ರಸಿದ್ಧ ಕಾದಂಬರಿಗಳು. ಇವರ ಮುಕ್ತಿ ಕಾದಂಬರಿ ಕನ್ನಡದಲ್ಲಿ ಹೊಸಕಾದಂಬರಿಯ ಮೊದಲ ಹೆಜ್ಜೆಯಾಗಿದೆ. ಕಥೆಯೇ ಪ್ರಧಾನವಾಗಿ ಕೌಟುಂಬಿಕ ಸನ್ನಿವೇಶಗಳನ್ನು ಚಿತ್ರಿಸುತ್ತಾ ಕಾದಂಬರಿ ಏಕತಾನತೆ ಹೊಂದಿದ್ದ ಕಾಲದಲ್ಲಿ ಆಧುನಿಕ ಯುವಕನನ್ನು ಕಾದಂಬರಿಯ ಕೇಂದ್ರವಾಗಿಸಿ ಹೊಸ ದೃಷ್ಟಿ ಕೊಟ್ಟ ಕೀರ್ತಿ ಇವರದಾಗಿದೆ. ಬದುಕಿನ ಮೂಲಭೂತ ಅರ್ಥ-ಉದ್ದೇಶಗಳನ್ನು ಶೋಧಿಸುತ್ತ, ವ್ಯಕ್ತಿಗತ ದೃಷ್ಟಿಯಿಂದ ಮೌಲ್ಯಗಳನ್ನು ವಿಶ್ಲೇಷಿಸುತ್ತ ಅವುಗಳ ಅನುಷ್ಠಾನದ ಅಗತ್ಯವನ್ನು ಪ್ರಶ್ನಿಸುತ್ತಾ ಹೊಸ ಮೌಲ್ಯಗಳಿಗಾಗಿ ಚಡಪಡಿಸುವ ಪ್ರಕ್ಷುಬ್ದ ಮನಸ್ಸಿನ ಚಿತ್ರಣ ಈ ಕಾದಂಬರಿಯಲ್ಲಿದೆ. ಇಲ್ಲಿನ ಪ್ರಜ್ಞಾಪ್ರವಾಹತಂತ್ರ ಜೀವನದ ಹಂಬಲ-ತೊಳಲಾಟಗಳನ್ನು ಅತ್ಯಂತ ಸಮರ್ಥವಾಗಿ ತೆರೆದುತೋರುತ್ತದೆ.

	ಸಮಕಾಲೀನ ಸಮಾಜ ಸುತ್ತಲಿನ ಸಮಾಜದೊಂದಿಗೆ ಅರ್ಥವತ್ತಾದ ಸಂಬಂಧ ಕಂಡುಕೊಳ್ಳಲಾಗದ ದುರಂತವೇ ವಿಕ್ಷೇಪ ಕಾದಂಬರಿಯ ವಸ್ತು. ವಿದ್ಯೆ, ಬುದ್ಧಿ, ಸಂಪತ್ತು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನ, ಗೌರವ ಎಲ್ಲ ಇದ್ದೂ ಜೀವನದ ಅರ್ಥ, ಗೊತ್ತು-ಗುರಿಗಳನ್ನು ಕಂಡುಕೊಳ್ಳಲಾಗದೆ ಅತೃಪ್ತಿ, ಅಸಹನೆಗಳಿಂದ ತೊಳಲಾಡುವ ಕಥಾನಾಯಕನ ಚಿತ್ರಣದ ಮೂಲಕ ಮುಂದುವರಿದ ನಗರ ಸಮಾಜಗಳಲ್ಲಿ ಉನ್ನತ ಹಾಗೂ ಮಧ್ಯಮ ವರ್ಗದ ಯುವ ಪೀಳಿಗೆಯ ಮನಸ್ಥಿತಿಗಳನ್ನು ತೆರೆದು ತೋರುತ್ತಾರೆ. ಪಾತ್ರಗಳ ವ್ಯಕ್ತಿತ್ತ್ವಕ್ಕೆ ತಕ್ಕಂತಹ ಭಾಷಾ ಪ್ರಯೋಗ, ಸಂದರ್ಭಕ್ಕನುಗುಣವಾಗಿ ಬಳಸುವ ಭಾಷೆಯಲ್ಲಿ ಅಡಕಗೊಂಡಿರುವ ನಾಟಕೀಯ ವ್ಯಂಗ್ಯ ಹಾಗೂ ಚಿತ್ರಿಕಶಕ್ತಿಗಳು ಇವರದೇ ವಿಶಿಷ್ಟ ಛಾಪನ್ನು ಎತ್ತಿತೋರುತ್ತದೆ. ಇವರ ಕಾದಂಬರಿಗಳನ್ನು ಕುರಿತಂತೆ “ಕಾದಂಬರಿಗಳಲ್ಲಿ ತಂತ್ರವನ್ನು ಅರ್ಥವಾಗಿಸಬಲ್ಲರು, ಅರ್ಥವನ್ನು ತಂತ್ರವಾಗಿಸಬಲ್ಲರು. ಇವರ ಕಾದಂಬರಿಗಳು ಕನ್ನಡ ಸಂವೇದನೆಯ ಒಂದು ವಿಶಿಷ್ಟ ಭಾಗದ ನಾಟಕೀಯ ಇತಿಹಾಸ” ಎಂಬ ವಿಮರ್ಶಕರ ಮಾತುಗಳು ಅಕ್ಷರಶಃಸತ್ಯವಾಗಿವೆ.

	ಇವರ ಓಂಣಮೋ ಕಾದಂಬರಿಗೆ 1999ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭ್ಯವಾಗಿದೆ. ಈ ಕಾದಂಬರಿಯಲ್ಲಿ ಜೈನ ಮತ್ತು ಕ್ರಿಶ್ಚಿಯನ್ ಧರ್ಮಗಳು, ಧರ್ಮ ಹಾಗೂ ಮಾಕ್ರ್ಸ್‍ವಾದಗಳ ವಿಚಾರ ಪ್ರಣಾಲಿಗಳು, ಓದುಗರೊಡನೆ ಸಂವಾದ ಸಾಧಿಸುವ ಡಯಲೆಕ್ಟಿಕಲ್ ತಂತ್ರದ ಮೂಲಕ ತೌಲನಿಕ ವಿಶ್ಲೇಷಣೆ, ವಿಮರ್ಶೆಗಳಿಗೆ ಒಳಗಾಗಿವೆ. ಇವರು  ನಿಧನಹೊಂದುವ ಒಂದು ವಾರದ ಮುಂಚೆ ಬರೆದ ಕೃತಿ ಇದಾಗಿದೆ. ಸ್ವಾತಂತ್ರ್ಯಕ್ಕೆ ಅದರಲ್ಲಿಯೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇವರು ನೀಡುತ್ತಿದ್ದ ಮನ್ನಣೆ, ಮಾನವನ ವಿಕಾಸಕ್ಕೆ ಯಾವ ಸೀಮೆಯನ್ನೂ ಮನ್ನಿಸದ ಇವರ ಮನೋಧರ್ಮ ಇವು ಇವರ ಕೃತಿಗಳಿಂದ ಹೆಚ್ಚು ಸ್ಪಷ್ಟಗೊಳ್ಳುತ್ತವೆ.

	ಸಾಹಿತ್ಯ ಮತ್ತು ಭಾಷೆ (1980), ನವ್ಯ ಸಾಹಿತ್ಯದರ್ಶನ (1989), ಗಂಗಾಧರ ಚಿತ್ತಾಲರ ಕಾವ್ಯಸೃಷ್ಟಿ (ಸಂ: 1987), ಕನ್ನಡ ಕಾದಂಬರಿ ನಡೆದು ಬಂದ ರೀತಿ (1989), ಎಂ.ಎನ್.ರಾಯ್ (1994)-ಇವು ಇವರ ವಿಮರ್ಶನ ಕೃತಿಗಳು.

	ಕನ್ನಡ ಕೃತಿಗಳಲ್ಲದೆ ಇಂಗ್ಲಿಷ್‍ನಲ್ಲಿಯೂ ಹಲವು ವಿಮರ್ಶನ ಕೃತಿಗಳನ್ನು ರಚಿಸಿದ್ದಾರೆ. ಕ್ರಿಟಿಕಲ್ ಎಸ್ಸೇಸ್ ಆನ್ ಇಂಡಿಯನ್ ರೈಟಿಂಗ್ಸ್ ಇನ್ ಇಂಗ್ಲಿಷ್ (ಸಂ: 1969), ಎಕ್ಸ್‍ಪೆರಿಮೆಂಟೇಷನ್ ವಿತ್ ಲ್ಯಾಂಗ್ವೇಜ್ ಇನ್ ಇಂಡಿಯನ್ ರೈಟಿಂಗ್ ಇನ್ ಇಂಗ್ಲಿಷ್ (1974), ದ ಇಮೇಜ್ ಆ¥sóï ಇಂಡಿಯ ಇನ್ ವೆಸ್ಟ್ರನ್ ಕ್ರಿಯೇಟಿವ್ ರೈಟಿಂಗ್ (ಸಂ: 1970), ಇಂಡಿಯನ್ ಪೊಯಿಟ್ರಿ ಟುಡೆ (ಕನ್ನಡ: 1976) ಮೊದಲಾದವು. ಇದಲ್ಲದೆ ಪಿ.ಲಂಕೇಶ್ ಅವರ ಕ್ರಾಂತಿ ಬಂತು ಕ್ರಾಂತಿ ನಾಟಕವನ್ನು ಹಿಯರ್ ಕಮ್ಸ್ ರೆವಲ್ಯೂಷನ್ ಎಂಬ ಶೀರ್ಷಿಕೆಯಿಂದ ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ. ಯು.ಆರ್. ಅನಂತಮೂರ್ತಿಯವರ ಅವಸ್ಥೆಯನ್ನೂ ಇಂಗ್ಲಿಷ್‍ಗೆ ಅನುವಾದಿಸಿದ್ದಾರೆ. 1987ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರಿಗೆ ಗೌರವ ನೀಡಿ ಸನ್ಮಾನಿಸಿತು. ಇವರು 1998 ಮಾರ್ಚ್ 26ರಂದು ನಿಧನರಾದರು.							
			*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ